ನೀಲಕಂಠಾಚಾರ್ಯ
	ಸು. 1485 ವೀರಶೈವಕವಿ. ವಾರ್ಧಕ ಷಟ್ಪಧಿಯಲ್ಲಿರುವ ಆರಾಧ್ಯಚಾರಿತ್ರ ಈತನ ಕೃತಿ. ಇದು ಮಲ್ಲಿಕಾರ್ಜುನ ಪಂಡಿತಾರಾಧ್ಯನ ಚರಿತ್ರೆಯನ್ನೊಳಗೊಂಡಿದೆ. ಶಿವಲೆಂಕಮಂಚಣ್ಣ ಪಂಡಿತ, ಉರಿಲಿಂಗಪೆದ್ದಿಗಳ ವಂಶಸ್ಥನಾದ ಈತ ವಂಶ ಪರಂಪರೆಯನ್ನು ಸುದೀರ್ಘವಾಗಿ ಹೇಳಿಕೊಂಡಿದ್ದಾನೆ. ವಿತತಕರ್ಣಾಟಲಕ್ಷಣ, ಕಮಲಭವನೆನಿಪ ಚತುರವರ ತಾನೆಂದು ತನ್ನನ್ನು ವಿಶ್ಲೇಷಿಸಿಕೊಂಡಿದ್ದಾನೆ. ಕೃತಿಯಲ್ಲಿ 5 ಪ್ರಕರಣ, 65 ಸಂಧಿ, 3,069 ಪದ್ಯಗಳಿವೆ. ಪಾಲ್ಕುರಿಕೆ ಸೋಮನಾಥ ಆಂಧ್ರಭಾಷೆಯಲ್ಲಿ ಹೇಳಿದುದನ್ನು ಈತ ಕನ್ನಡದಲ್ಲಿ ರಚಿಸಿದ್ದಾನೆ. 

	ಬಸವಾದಿ ಪ್ರಮಥರು ಭೂಲೋಕದಲ್ಲಿ ಕೈಗೊಂಡ ಕಾರ್ಯವನ್ನು ಮುಂದುವರಿಸಲು ಪರಮೇಶ್ವರ ಮಲ್ಲಿಕಾರ್ಜುನ ಪಂಡಿತಾರಾಧ್ಯನನ್ನು ಧರೆಗೆ ಕಳುಹುತ್ತಾನೆ. ಭೃಂಗಿಯ ನಿಷ್ಠೆ, ದೂರ್ವಾಸನ ಶಾಪಶಕ್ತಿ, ಗೌತಮನ ವೈಖರಿ, ರುದ್ರಪ್ರಮಥರ ಪ್ರಸಾದೈಕರತಿ, ಉಪಮನ್ಯಮುನಿಯ ಗುರುತ್ವ, ವೀರಭದ್ರನ ಶೌರ್ಯ-ಇವನ್ನು ಒಟ್ಟುಗೂಡಿಸಿಕೊಂಡ ಬಿಂಬವೊಂದು ದ್ರಾಕ್ಷರಾಮ ಪಟ್ಟಣದ ಭೀಮಪಂಡಿತನ ಸತಿಗೌರಾಂಬಿಕೆಯ ಉದರದಲ್ಲಿ ಮೂರ್ತಗೊಳ್ಳತ್ತದೆ. ಹೀಗೆ ಜನಿಸಿದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸಕಲಾಗಮಪಂಡಿತನಾಗಿ ಧರ್ಮಬೋಧೆ ಮಾಡುತ್ತಾನೆ. ಇದೇ ಇಲ್ಲಿನ ಕಥಾವಸ್ತು.

	ಧೀಕ್ಷಾಪ್ರಕರಣದಲ್ಲಿ ಅಷ್ಠಾವರಣಗಳ ಮಹಿಮೆಯನ್ನೂ ಪುರಾತನ ಪ್ರಕರಣದಲ್ಲಿ ಗುರುಭಕ್ತಾಂಡಾರ, ಮಲ್ಹಣ ಮೊದಲಾದ ಶಿವಭಕ್ತರ ಕಥಾನಕಗಳನ್ನು ವಾದ ಪ್ರಕರಣದಲ್ಲಿ ಬೌದ್ಧ, ಜೈನ, ಚಾರ್ವಾಕ, ವೈದಿಕ ಮತಗಳನ್ನು ಖಂಡಿಸಿರುವುದನ್ನು ಮಹಿಮಾ ಪ್ರಕರಣದಲ್ಲಿ ಚೋಳರಾಜ, ನಂಬಿಯಣ್ಣ, ದೋನಾಮಾರ್ಯ ಮೊದಲಾದ ಶರಣರ ಮಹಿಮೆಯನ್ನೂ ಕಡೆಯದಾದ ಪರ್ವತ ಪ್ರಕರಣದಲ್ಲಿ ಶ್ರೀಶೈಲಗಿರಿಯ ಮಹಿಮೆಯನ್ನು ಕಾಣಬಹುದು.

	ಸಂದರ್ಭಕ್ಕೆ ತಕ್ಕಂತೆ ಕಾವ್ಯದುದ್ದಕ್ಕೂ ಶಿವ, ಅಗ್ನಿ, ವಾಯು, ಸ್ಕಂದಪುರಾಣಗಳಿಂದ ಆಯ್ದ ಉದ್ಧøತ ವಾಕ್ಯಗಳಿವೆ. ಕಾವ್ಯ ಬಂಧ ಲಲಿತವಾಗಿದೆ.							(ಎಂ.ಆರ್.ಯು.; ಎಂ.ಎಸ್.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ